Wednesday, April 6, 2016

ಯಕ್ಷರಂಗದ ಹಾಸ್ಯ ಚಕ್ರವರ್ತಿ ಮಿಜಾರು ಅಣ್ಣಪ್ಪ ನೆನಪು

ಭಿನವ ತೆನಾಲಿ, ಹಾಸ್ಯ  ಚಕ್ರವರ್ತಿ ಮೊದಲಾದ ಬಿರುದನ್ನು  ಪಡೆದಿರುವ ಮಿಜಾರು ಅಣ್ಣಪ್ಪ ತುಳು ಮತ್ತು ಕನ್ನಡ ಯಕ್ಷಗಾನದ  ಹಾಸ್ಯ ಪಾತ್ರಗಳಲ್ಲಿ ಹೆಸರನ್ನು ಗಳಿಸಿದವರು .ಇವರು ಓದಿದ್ದು ಏಳನೇ ತರಗತಿ ಆದರೂ ಪುರಾಣ ಬಗೆಗೆ ಆಳವಾದ ಜ್ಞಾನವನ್ನು ಯಕ್ಷಗಾನದ ಮೂಲಕ ಪಡೆದುಕೊಂಡರು .ಯಕ್ಷಗಾನ ಕಲೆಯನ್ನು  ದೈವದತ್ತವಾಗಿ ಪಡೆದುಕೊಂಡ ಇವರು ಸುಮಾರು 300ಕ್ಕೂ  ಅಧಿಕ ಯಕ್ಷಗಾನ  ಪ್ರಸಂಗಗಳಲ್ಲಿ ತಮ್ಮ ಕಲಾ ಸಾಮರ್ಥ್ಯವನ್ನು ಪ್ರದರ್ಶಿಸಿದವರು . ಮೂಡಬಿದಿರೆಯ ಸಣ್ಣಪ್ಪ ರೈ ಯವರು  ಇವರ ಗುರುಗಳಾಗಿದ್ದರು.  ಗುರುಗಳ ಜತೆ 24 ಶಿಷ್ಯರ  ಒಂದು ತಂಡವೇ ಇತ್ತು .ಈ ಗುಂಪಿನಲ್ಲಿ ಇವರು ಓರ್ವರು. ಆರಂಭದಲ್ಲಿ ದೂತ  ವೇಷ  ಮಾತ್ರ ಗುರುಗಳು ಮಾಡಿಸುತ್ತಿದ್ದರು ಮೊದ ಮೊದಲಿಗೆ ಕೆಲವು ಯಕ್ಷಗಾನ ಪ್ರಸಂಗಗಳಲ್ಲಿ  ಹದಿನೆಂಟು ಬಾರಿ ಪ್ರವೀಶವಿತ್ತು .ಹದಿನೆಂಟು ನಮೂನೆಯ ವೇಷ ಭೂಷಣ , ಹದಿನೆಂಟು ಬಗೆಯ ಮಾತುಗಳ ಪಾತ್ರ ಲಭಿಸಿತ್ತು  .ಎಂದು ಅವರನ್ನು   ಸಂದರ್ಶಿಸಿದ  ಸಮಯದಲ್ಲಿ ಹಂಚಿಕೊಳ್ಳುತ್ತಾರೆ .
MJIARU ANNAPPA
ಕನ್ನಡ ಪ್ರಸಂಗಗಳೇ ಹೆಚ್ಚು ಸಿಗುತ್ತಿದ್ದ  ಸಮಯದಲ್ಲಿ ತುಳು ಯಕ್ಷಗಾನಕ್ಕೆ  ಮಾರ್ಕೆಟಿಂಗ್  ಶುರುವಾದಾಗ ಅನೇಕ ತುಳು ಯಕ್ಷಗಾನ ಪ್ರಸಂಗಕರ್ತರು ಧ್ವನಿ ಮುದ್ರಣ ಶುರು ಮಾಡಲು ಆರಂಭಿಸಿದರು. ಎಲ್ಲಾ ಕಡೆಗಳಲ್ಲೂ ಇವರಿಗೆ ಹಾಸ್ಯದ  ಪಾತ್ರಗಳೇ ಸಿಕ್ಕಿವು. ಬಳಿಕ           ತುಳುವಿನಲ್ಲೂ  ಹೊಸ ಅಲೆಯೇ ಶುರುವಾಯಿತು .ಎಲ್ಲಿಯ ವರೆಗೆ ಎಂದರೆ ಮಿಜಾರು ಅಣ್ಣಪ್ಪ ರವರ ಹಾಸ್ಯ ಪಾತ್ರವನ್ನು ನೋಡಲೆಂದೇ ಜನ ಸಾಗರ ಹರಿದು ಬರುತ್ತಿತ್ತು .ಕಟೀಲು ಮೇಳದಲ್ಲಿ  17 ವರ್ಷ, ಇರಾ ಮೇಳ ,ಕರ್ನಾಟಕ ಮೇಳ  ಹೀಗೆ  ಒಟ್ಟು  68 ವರ್ಷಗಳ ಕಾಲ ಯಕ್ಷರಂಗದಲ್ಲಿ ಹಾಸ್ಯದ ರಸವನ್ನೇ ಉಣಿಸಿದ ಅಣ್ಣಪ್ಪರವರು ಆರು ದಶಕಗಳಷ್ಟು ಕಾಲ ಕಲ್ಲಾಡಿ ಮನೆತನದ  ಮೂರು ತಲೆಮಾರಿನ (ಕೊರಗ ಶೆಟ್ಟಿ, ವಿಠ್ಠಲ ಶೆಟ್ಟಿ,ದೇವಿ ಪ್ರಸಾದ್ ಶೆಟ್ಟಿ)ಯಜಮಾನರ ಮೇಳಗಳಲ್ಲಿ ಯೇ  ಸೇವೆ ಸಲ್ಲಿಸಿರುವುದು ವಿಶೇಷ ..ಇವರು ಹಿರಿಯರಾದ  ಪುರುಷೋತ್ತಮ ಭಟ್ ರನ್ನು ಆಗಾಗ ನೆನಪಿಸಿಕೊಳ್ಳುತ್ತಾರೆಯಕ್ಷ ದಿಗ್ಗಜರಾದ ಶೇಣಿ ಗೋಪಾಲ ಕೃಷ್ಣ ,ಅರುವ ಕೊರಗಪ್ಪ ಶೆಟ್ಟರು ಮುಂತಾದ ಹಿರಿಯ ಘಟಾನುಘಟಿ  ಕಲಾವಿದರ ಜೊತೆ ನಾನಾ  ಪಾತ್ರಗಳನ್ನು ಮಾಡಿದ್ದರು. 
ಕೋಟಿ ಚೆನ್ನಯ ದ ಪಯ್ಯ ಬೈದ, ಜೋತಿಷಿ ,ದೇವು ಪೂಂಜದ ಲಿಂಗಪ್ಪ ಆಚಾರಿ ,ಕೋರ್ದಬ್ಬು ಬಾರಗದ          ಕೋರ್ದಬ್ಬುವಿನ ಸಖ, ಜಾಲ ಕೊರತಿ ,ಕಾಡಮಲ್ಲಿಗೆಯ ಚೋಂಕ್ರ ,ದಳವಾಯಿ ದುಗ್ಗಣ್ಣ ದ ಕಂಪಣ್ಣ  ಮೂಲ್ಯ, ಕೌಡೂರ ಬೊಮ್ಮ  ಪ್ರಸಂಗದ  ಬೊಮ್ಮ ,ಬೊಳ್ಳಿ ಗಿಂಡೆ ಯ  ಕೇಚು, ನಳದಮಯಂತಿಯ ಬಾಹುಕ ನ ಪಾತ್ರ ಮರೆಯಲಾಗದ್ದು. ಕನ್ನಡದ ಪೌರಾಣಿಕ ಪ್ರಸಂಗಗಳಲ್ಲಿ ವಿಶಿಷ್ಟ ವಿಭಿನ್ನ ಪಾತ್ರಗಳ ಮೂಲಕವೂ ಹಾಸ್ಯದ ಸುಧೆಯನ್ನು ಹರಿಸಿ ಯಕ್ಷಪ್ರೇಮಿಗಳನ್ನು ರಂಜಿಸಿದವರು . ಅಣ್ಣಪ್ಪ ರ ಜತೆ ಸಾಮಗ ಹಾಗೂ ಕೋಳ್ಯೂರು  ಜೋಡಿ ಪ್ರಸಿದ್ದಿಯಾಗಿ ಜನ ಮೆಚ್ಚುಗೆ ಪಡೆದಿತ್ತು. ಯಕ್ಷಗಾನ ಮೇಳದಲ್ಲಿ ಇರುವಾಗಲೇ ಅಣ್ಣಪ್ಪರವರು ಆರು ಹಾಸ್ಯ ಕಲಾವಿದರನ್ನು ಸಿದ್ಧಕೊಳಿಸಿದ್ದರು. ಆದರೆ ಕೆಲ ಸಮಯದ ನಂತರ ಅವರು ಬೇರೆ ದಾರಿಯನ್ನು ಹಿಡಿದರು. ಮಿಜಾರು ತಿಮ್ಮಪ್ಪರವರು ಮಾತ್ರ ಅದನ್ನು ಉಳಿಸಿ ಕೊಂಡರು .ಕುಡುಬಿ ಸಮುದಾಯದಲ್ಲಿ ಜನಿಸಿದ ಇವರು  ಆರಂಭದ ದಿನಗಳಲ್ಲಿ  ಜೀವನಕ್ಕಾಗಿ ಕೈ ಮಗ್ಗದ ಕೆಲಸವನ್ನು ಮಾಡುತ್ತಿದ್ದರು. ಬಳಿಕ ಯಕ್ಷಗಾನದ ಒಲವು ಜಾಸ್ತಿಯಾಯಿತು .ಇವರ ಹಾಸ್ಯ ಯಾರಲ್ಲೂ ಮನಸ್ತಾಪಕ್ಕೆ ಕಾರಣವಾಗದೆ ಅದು ಕೇವಲ ಯಕ್ಷಪ್ರೇಮಿಗಳನ್ನು  ರಂಜಿಸುವ ಸಾಧನವಾಗಿತ್ತು. ಆದರೆ ಅದ್ಯಾಕೊ   ಯಕ್ಷಗಾನ ಪ್ರಸಂಗವೊಂದರಲ್ಲಿ ಆಚಾರಿ ಪಾತ್ರಕ್ಕೆ ಸಂಬಂಧಿಸಿದಂತೆ  ದೊಡ್ಡ ಗಂಡಾಂತರ ಎದುರಿಸಬೇಕಾಯಿತು .ಅಣ್ಣಪ್ಪರವರು ಕೋರ್ಟಿಗೂ ಹೋಗಬೇಕಾಯಿತು . ಆದರೆ ನ್ಯಾಯ ದೇವತೆ ಕಲಾವಿದನಿಗೆ ನ್ಯಾಯ ಕೊಡುವುದರ ಮೂಲಕ ಗೆಲ್ಲಿಸಿದಳು.

ಅಣ್ಣಪ್ಪರವರು ಭಾರತವಲ್ಲದೆ ಕಡಲಾಚೆಗಿನ ದುಬೈ ಬೆಹರಿನ್ ಗಳಲ್ಲಿ ಕೂಡ ಬಣ್ಣ ಹಚ್ಚಿ ಅಲ್ಲಿನ ಯಕ್ಷಪ್ರೇಮಿಗಳನ್ನು ರಂಜಿಸಿದವರು. 2014 ರಲ್ಲಿ ಭೇಟಿಯಾದಾಗ ಸುಮಾರು ತೊಂಬತ್ತೊಂದು ವರ್ಷ .ವಯೋಸಹಜ ಬದಲಾವಣೆಗಳಿದ್ದರೂ ಎಲೆ ಅಡಿಕೆ ತಿನ್ನುತ್ತಾ ನಗು,ಹಾಸ್ಯ ಹಾಗೆಯೇ ಇತ್ತು. ಆದರೆ ಈ ಹಿರಿಯ ಚೇತನ ಈಗ ನಮ್ಮೊಂದಿಗಿಲ್ಲ. ಯಕ್ಷರಂಗದಲ್ಲಿ ಹಾಸ್ಯಕ್ಕೆ  ಒಬ್ಬರೆ ಅಣ್ಣಪ್ಪ. ಅವರಿಗೆಅವರೇ ಸಾಟಿ.
 ವಿ.ಕೆ ಕಡಬ  


No comments:

Post a Comment