Tuesday, April 19, 2016

ಜನಪದ ಸಾಹಿತ್ಯದ ವಿಶ್ವಕೋಶ- ಪಾಡ್ದನ ತಜ್ಞೆ ಗಿಡಿಗೆರೆ ರಾಮಕ್ಕ(Gidigere Ramakka)

ತುಳುನಾಡಿನ ಜನಪದ ಸಾಹಿತ್ಯ ಕೇವಲ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ವರ್ಗಾಯಿಸುವ  ಬರೇ ಮೌಖಿಕ ಪರಂಪರೆಯಲ್ಲ, ಬದಲಾಗಿ  ನಿತ್ಯ ಬದುಕಿನಲ್ಲಿ  ಅನುಭವಿಸಿದ ಒಂದು ಅಭಿವ್ಯಕ್ತಿಕರಣ ಮತ್ತು ಸಂಕೀರ್ಣ ಸಾಮಾಜಿಕತೆಯ ಜೀವ ಮಿಡಿತ.  ಇಂತಹ  ಅಮೂಲ್ಯ ಐತಿಹಾಸಿಕ  ಬದುಕನ್ನು ವರ್ತಮಾನದಲ್ಲಿ ಕಟ್ಟಿಕೊಡುವ  ಪಾಡ್ದನ ತಜ್ಞೆ  ಗಿಡಿಗೆರೆ ರಾಮಕ್ಕ ಅವರ ಸಾಮರ್ಥ್ಯ ವಿವರಣೆಗೆ ನಿಲುಕದ್ದು. ಎಂಭತ್ತೈದರ ಇಳಿವಯಸ್ಸಿನಲ್ಲಿಯೂ  ಸಂಧಿ, ಪಾಡ್ದನಗಳನ್ನು ನಿರಾರ್ಗಳವಾಗಿ ಹಾಡಿ, ಕೇಳುಗರ ಮೈಪುಳಕಗೊಳಿಸುತ್ತಾ  ಅನೇಕ ಸಂಶೋಧನೆಗಳಿಗೆ ಇವರು ಆಕಾರ ಗ್ರಂಥವಾಗಿದ್ದಾರೆ . ಕರ್ನಾಟಕದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಾದ ಮಂಗಳೂರು ವಿಶ್ವವಿದ್ಯಾಲಯ ಮತ್ತು ಕನ್ನಡ ವಿಶ್ವವಿದ್ಯಾಲಯ, ಹಂಪಿ ಇಲ್ಲಿ ನಡೆದಿರುವ ಜನಪದ ಸಂಶೋಧನೆ, ಪಿ.ಹೆಚ್.ಡಿ ಅಧ್ಯಯನಗಳಲ್ಲಿ  ಇವರ ಬೌದ್ಧಿಕ ಕೊಡುಗೆಯ ದಟ್ಟ ಛಾಯೆ ಕಣ್ಣೆದುರಿಗೆ ನಿಲ್ಲುತ್ತದೆ .
ಸಂದರ್ಶನ ಸಮಯದಲ್ಲಿ ಪಾಡ್ದನ ಕೋಗಿಲೆ ಗಿಡಿಗೆರೆ ರಾಮಕ್ಕ
ಮಹಾತ್ಮಗಾಂಧಿಜಿಯವರ ತತ್ವಾದರ್ಶವನ್ನು ಪಾಲಿಸುವ ಇವರು  ದಲಿತ  ಸಮಾಜದ ಪ್ರತಿಭಾನ್ವಿತರಾಗಿ ಸಾಮಾನ್ಯ ಬದುಕಿನಲ್ಲಿ ಎಲ್ಲರಿಗೂ ಆಪ್ತರಾದವರು . ಪ್ರತಿ ದಿನವೂ ಪಾಡ್ದನ ಹೇಳುತ್ತಾ ತನ್ನ ಜೀವನದಲ್ಲಿ ಪಾಡ್ದನವನ್ನೇ ಅಳವಡಿಸಿಕೊಂಡ ಗಿಡಿಗೆರೆ ರಾಮಕ್ಕ  ಸಿರಿ ಪಾಡ್ದನ ದ ಮೂಲಕ ಅವರು ದೊಡ್ಡ ಶ್ರೇಯಸ್ಸು ಗಳಿಸಿರುವುದು ಮುಗೇರ ಸಮುದಾಯಕ್ಕೆ ಹೆಮ್ಮೆಯ ವಿಷಯ . ವಿಶ್ವವಿಖ್ಯಾತ ಜನಪದ ವಿದ್ವಾಂಸರುಗಳಾದ ಅಮೇರಿಕಾದ ಡಾ. ಪೀಟರ್ ಕ್ಲಾಸ್, ಫಿನ್ಲೆಂಡಿನ ಡಾ. ಲೌರಿ ಹಾಂಕೋ ಸೇರಿದಂತೆ ಅನೇಕ ವಿದೇಶಿ ಸಂಶೋಧಕರು ಗಿಡಿಗೆರೆ ರಾಮಕ್ಕ ಹಾಡಿರುವ ಪಾಡ್ದನ ಆಧರಿಸಿ ಪಿ.ಹೆಚ್.ಡಿ ಗಳಿಸಿದ್ದು ನಮಗೆಲ್ಲ ಸಂತಸದ ಸಂಗತಿ.  ದೀರ್ಘವಾಗಿ ಹಾಡಿರುವ ‘ಸಿರಿ ಪಾಡ್ದನ’,  ಎ. ವಿ. ನಾವಡರ ಸಂಪಾದಕತ್ವದಲ್ಲಿ ಬೃಹತ್ ಗ್ರಂಥವಾಗಿ ಕನ್ನಡ ವಿಶ್ವವಿದ್ಯಾಲಯದಿಂದ ಪ್ರಕಾಶಿಸಲ್ಪಟ್ಟು, ಆ ಮೂಲಕ ಇಂದಿಗೂ ಈ ಗ್ರಂಥವನ್ನು ದೇಶ-ವಿದೇಶದ ಜನಪದ ವಿದ್ವಾಂಸರು ಸಂಶೋಧನೆಯಲ್ಲಿ ಪರಾಮರ್ಶಿಸುತ್ತಿರುವುದು ಪಾಡ್ದನ ಕೋಗಿಲೆಯ  ವಿದ್ವತ್ ಗೆ  ಸಂದ ಗೌರವವಾಗಿದೆ .ಅಕ್ಷರಾಭ್ಯಾಸದ ಹೊರತಾಗಿಯೂ ಓ ಬೆಲೆ, ನಲ್ಲೊರಿ ಮಾಮ, ಮಂಜೊಟ್ಟಿ ಗೋಣ, ಗೋವಿಂದ ಬದನೆ, ವಾವಾ ಚಟ್ನಿ, ಕನಡ, ಮಾಲ್ಂಡ್ ಮರ, ಕುಮಾರ, ಸಿರಿ, ಬಂಟರು, ಅಬ್ಬಗ-ದಾರಗೆ ಸೇರಿದಂತೆ ಹಲವಾರು ದೈವಿಕ ಆಚರಣೆ ಮತ್ತು ಶ್ರಮಿಕ ಸಂಸ್ಕ್ರತಿಯ ಸಂಧಿ-ಪಾಡ್ದನಗಳು ಇವರಿಗೆ  ಕಂಠಪಾಠ. ಪ್ರತಿ ಬಾರಿಯೂ ಸಂಧಿ-ಪಾಡ್ದನಗಳೆಲ್ಲವೂ ಇವರ  ಕಂಠದಲ್ಲಿ ಮರುಹುಟ್ಟು ಪಡೆದು ವಿಸ್ತೃತಗೊಳ್ಳುವ ಪರಿ ವಿಸ್ಮಯವೇ ಆಗಿದೆ. ಜೊತೆಗೆ ಇವರು ಹೇಳುವ ನೈಜ ದಾಟಿ ಗೆ ಎಲ್ಲರೂ ತಲೆಬಾಗಲೇ ಬೇಕು . ಹಾಗಾಗಿಯೇ ಇವರು  ಹಾಡಿದ ‘ಲಾಲಿ ಹಾಡು’ ಬಿಬಿಸಿ ವಾಹಿನಿಯ ಮೂಲಕ ವಿಶ್ವದಾದ್ಯಂತ ಪ್ರಸಾರವಾಗುವುದರ ಜೊತೆಗೆ ತಮಗೆ ಜಾಗತಿಕ ಮೌಲ್ಯವೂ ದೊರೆತಿದೆ .
ಮೂಲತ: ವಾಮಾಂಜೂರಿನವರಾದ ತಾವು ಕಾಪಿರ  ಗಿಡಿಗೆರೆಯವರನ್ನು ವಿವಾಹವಾಗಿ, ಏಳು ಮಕ್ಕಳ ತುಂಬು ಸಂಸಾರ ಹೊಂದಿದವರು. ಮಂಗಳೂರು ತಾಲೂಕಿನ ಕೊಂಡೆಮೂಲ ಗ್ರಾಮದ ಕಟೀಲು ಗಿಡಿಗೆರೆಯಲ್ಲಿ ರಾಮ- ಲಕ್ಷ್ಮಣ  ಅವಳಿ ಮಕ್ಕಳೊಂದಿಗೆ ವಾಸವಾಗಿದ್ದಾರೆ .ತನ್ನ ಓರ್ವ ಮಗ  ಲಕ್ಷ್ಮಣ ತಾಯಿಯಂತೆಯೇ ಪಾಡ್ದನವನ್ನು ಅಭ್ಯಾಸ ಮಾಡುತ್ತಿದ್ದಾರೆ . ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ವರ್ಗಾಯಿಸುವ ಪ್ರಯತ್ನವೂ ಹೌದು . ಜನಪದ ಸಾಹಿತ್ಯದ ಕಣಜದಂತಿದ್ದ  ತಮ್ಮ  ಅಜ್ಜಿ ಉಮ್ಮಕ್ಕನಿಂದ ಮತ್ತು ಬದುಕಿನ ನೊಗ ಹೊತ್ತಿ ಗದ್ದೆಗಿಳಿದ ಕ್ಷಣದಿಂದ ತುಳು ಕಬಿತೆ,  ಪಾಡ್ದನ ಮತ್ತು ಸಂಧಿಗಳು  ಬಳುವಳಿಯಾಗಿ ಬಂದಿದೆ . ನಿಜಾರ್ಥದಲ್ಲಿ ತಾವು ‘ಜನಪದ ಸಾಹಿತ್ಯದ ವಿಶ್ವಕೋಶ’, ನಮ್ಮ ಕಣ್ಣ ಮುಂದಿರುವ ‘ನಡೆದಾಡುವ ಜನಪದ ವಿಶ್ವವಿದ್ಯಾನಿಲಯ’ವೆಂದರೂ ಅತಿಶಯೋಕ್ತಿಯಾಗಲಾರದು.

ರಾಮಕ್ಕ ಅವರ  ಜನಪದ ಸಾಹಿತ್ಯ ಕೈಂಕರ್ಯಕ್ಕೆ,ಸಿಕ್ಕಿರುವ ಗೌರವ :-
1. 2015 ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರಿಂದ ಸ್ವೀಕರಿಸಿರುವುದು .
2. 2001 ರ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಪ್ರಶಸ್ತಿ,
3.  2000 ರಲ್ಲಿ ವೀರರಾಣಿ ಅಬ್ಬಕ್ಕ ಪ್ರಶಸ್ತಿ, ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ, ಕಟೀಲು ದೇವಳದ ‘ಪಾಡ್ದನ ಕೋಗಿಲೆ’ ಬಿರುದು,
4.  ಯುವವಾಹಿನಿ ಮುಲ್ಕಿ ಇವರ ಸಂಮಾನ ಸೇರಿದಂತೆ ಅನೇಕ ಪುರಸ್ಕಾರ, ಪ್ರಶಸ್ತಿಗಳು
5. 2016 ರಲ್ಲಿ ಏಪ್ರಿಲ್ 17  ರಂದು ಮುಗೇರ ಕ್ಷೇಮಾಭಿ ವೃದ್ದಿ ಸಂಘ ಮಂಗಳೂರು ಘಟಕದ ವತಿಯಿಂದ ಗಿಡಿಗೆರೆಯಲ್ಲಿ ಸನ್ಮಾನ .ತಮ್ಮ ಸಾಧನೆಗೆ ಸಂದ ಗೌರವಗಳಾಗಿವೆ.

No comments:

Post a Comment